~~~~( * ) ~~~~
ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಶಾಲೆ ಬೆಲ್ ಹೊಡಿತು ಅಂದ್ರೆ ಮುಗೀತು. ಮುಂದಿನ ಒಂದೂವರೆ ದಿನ ಹೇಗೆ ಕಳೆಯುತ್ತೆ ಅನ್ನೋದೇ ಗೊತ್ತಾಗ್ತಿರ್ಲಿಲ್ಲ. ಮದ್ಯಾಹ್ನ ಮನೆಗೆ ಹೋದ್ಮೇಲೆ ಅಲ್ಪ ಸ್ವಲ್ಪ ತಿಂದು, ಸ್ನೇಹಿತರನ್ನ ಒಂದು ಕಡೆ ಸೇರ್ಸೋದು ನಾನ್ ಮಾಡ್ತಿದ್ದ ಮೊದ್ಲ ಕೆಲಸ. ಎಲ್ಲರೂ ಒಟ್ಟಾದ್ಮೇಲೆ ಎರಡು ಟೀಂ ಮಾಡ್ಕಂಡು ಕ್ರಿಕೆಟ್ ಆಡೋದು.
ಸಂಜೆ ಸಾಕು-ಸಾಕಾಗಿ ಇನ್ನು ನಿಲ್ಲೋಕೂ ಆಗಲ್ಲ ಎನ್ನಿಸಿ, ತಲೆ ಸುತ್ತಿ ಬೀಳ್ತೀನಿ ಅನ್ನೋಷ್ಟರವರೆಗೆ ಆಟ.
ತಲೆ ಸುತ್ತೋದು ಯಾಕೇ? ಊಟ ಮಾಡ್ತಿರ್ಲಿವ್ಲಾ?
ಊಟ ಮಾಡೋಕ್ಕೆ ನಾನು ಮನೆ ಒಳ್ಗೆ ಹೋದಾಗ ಉಳ್ದವ್ರು ಯಾರದ್ರೂ ಸಹ ಅವ್ರವ್ರ ಮನೆಗೆ ಊಟಕ್ಕೆ ಹೋಗ್ಬಿಟ್ರೆ?
ಆಮೇಲೆ ಆಟ ಆಡೊಕ್ಕೆ ಜನ ಎಲ್ಲಿ ಸಿಗ್ತಾರೆ?
ಎಲ್ಲರ್ನೂ ಮತ್ತೆ-ಮತ್ತೆ ಒಟ್ಟು ಮಾಡೋದು ಅಂದ್ರೇನೂ ಸುಮ್ನೆ ಕೆಲ್ಸಾನ?
ಅದಿಕ್ಕೆ ಅಂತಾನೆ ಒಂದರ್ಧ ಗಂಟೆ ವೇಸ್ಟ್ ಮತ್ತೊಮ್ಮೆ ದಂಡವಾಗಿ ಬಿಡುತ್ತೆ.
ಸೋ, ಆಟದ ನಡ್ವೆ ನೀರ್ ಕುಡಿಯೋಕೆ ಮಾತ್ರ ಸ್ವಲ್ಪ ವಿಶ್ರಾಂತಿ.
ಅಂದ್ರೆ, ವರ್ಷ ಪೂರ್ತಿ ಬರೀ ಕ್ರಿಕೆಟ್ ಆಡೂದಾ? ಬೇರೆ ಏನೂ ಆಟನೇ ಗೊತ್ತಿರ್ಲಿಲ್ವಾ?
ಮಾವಿನಣ್ಣಿನ ಸುಗ್ಗಿ ಬಂದಾಗ ಗೊತ್ತಲ್ಲಾ? ಹಣ್ಣು ತಿಂದು ವಾಟೆನ ತಿಪ್ಪಿಗೆ ತಂದು ಹಾಕ್ತಿದ್ರಲ್ಲಾ?
ಈ ವಾಟೆಗಳೇ ಮುಂದೆ ಮೊಳ್ಕೆ ಒಡ್ದು ಗಿಡ ಆಗಿ, ಕೆಂಪು ಚಿಗುರೆಲೆ ಬರ್ತಿದ್ವಲ್ಲಾ?
ಅಂತ ಚಿಕ್ಕ ಚಿಕ್ಕ ಗಿಡಗಳನ್ನ ಹುಡ್ಕೋದು. ಊರಲ್ಲಿದ್ದ ಅನೇಕ ತಿಪ್ಪೆಗಳ ಮೇಲೆಲ್ಲಾ ಅಡ್ಡಾಡಿ ಸಿಗ್ತಿದ್ದ ಗಿಡಗಳನ್ನ ವಾಟೆ ಸಮೇತ ಕಿತ್ಕಂಡು ಬರೋದು. ತಂದು ಅವನ್ನೆಲ್ಲಾ ಒಂದೊಂದು ಪ್ಯಾಕೆಟ್ ನಲ್ಲಿ ಬೆಳ್ಸದು.
"ಲೇ ಹನುಮಂತನ ದೇವಸ್ಥಾನದ ಹಿಂದೆ ಕೆಲವು ನಿಂಬೆ ಹಣ್ಣಿನ ಗಿಡಗಳನ್ನ ನೋಡಿದ್ದೇ ಕಣ್ ಲೇ!...ನೋಡ್ಕೋಂಡ್ ಬರನಾ ಬರ್ರಲೇ!!!"
ಈ ರೀತಿ ನಮ್ಮ ನಮ್ಮಲ್ಲಿ ಚರ್ಚೆಗಳಾಗ್ತಿದ್ವು.
ಎಲ್ಲಿಲ್ಲಿ ಬಿಟ್ಟಿ ಗಿಡಗಳು ಸಿಗ್ತಾವೋ ಅಲ್ಲೆಲ್ಲಾ ಅಡ್ಡಾಡ್ತಿದ್ವಿ. ಗಿಡಗಳು ಸಿಕ್ಕಾಗ ಅವುಗಳನ್ನ ಎಚ್ಚರಿಕೆಯಿಂದ ಕಿತ್ತು ತರ್ತಿದ್ವಿ.
ಬರೀ ಮಾವಿನ ಗಿಡ, ನಿಂಬೆ ಗಿಡ ಮಾತ್ರ ಅಲ್ಲಾ! ಹಲಸಿನ ಗಿಡ, ಪೇರ್ಲ ಗಿಡ, ಪಪಾಯ ಗಿಡ, ಹೀಗೇ..ಹಣ್ಣಿನ ಗಿಡಗಳು, ಹೂವಿನ ಗಿಡಗಳನ್ನೆಲ್ಲಾ ಹುಡುಕ್ತಿದ್ವಿ. ಸಿಕ್ಕರೆ ತಂದು ಪ್ಯಾಕ್ ಮಾಡ್ತಿದ್ವಿ.
ಮನೆಗೆ ಕಾಪಿ ಪುಡಿ ತಂದ ಪ್ಲಾಸ್ಟಿಕ್ ಪಾಕೆಟ್‌ಗಳನ್ನೇ ಬಳಸುತ್ತಿದ್ದೆವು.
ನಂತರ ಮನೆಯ ಹಿತ್ತಲಲ್ಲಿ ಇಟ್ಟು ಸ್ವಲ್ಪ ತಿಂಗಳುಗಳವರೆಗೆ ಬೆಳಸ್ತಿದ್ವಿ.
ಕೊನೆಗೆ ಹೊಲಕ್ಕೆ ತಂದು ಸಸಿ ನೆಡ್ತಿದ್ವಿ. ಇವೆಲ್ಲಾ ನಮ್ಮ ಹವ್ಯಾಸವಾಗಿದ್ದವು.
ನಿಮ್ಮ ಮನೆಯ ಹಿತ್ತಲಿನಿಂದ, ಅವನ್ನ ಬೇರೇ ಯಾರಾದ್ರೂ ಕದ್ದು ಬಿಟ್ರೆ?
ಹೌದು. ಇಂತಹ ಸಾದ್ಯತೆಗಳಿದ್ದವು. ಅದಿಕ್ಕೆ ಅಂತ ನಾವು ಯಾವಾಗ್ಲೂ ಒಂದು ಕಣ್ಣಿಟ್ಟಿರ್ತಿದ್ವಿ
ನಮ್ಮ ಹಿತ್ತಲಲ್ಲಿ ಒಂದ್ ಗಿಡದ ಜಾಗ ಬದಲಾಗಿದ್ರೂ ನಮ್ಗೆ ಗೊತ್ತಾಗ್ಬಿಡ್ತಿತ್ತು.
ನಮ್ಮ ಹಿತ್ತಲಲ್ಲಿ ಒಂದ್ ಗಿಡದ ಜಾಗ ಬದಲಾಗಿದ್ರೂ ನಮ್ಗೆ ಗೊತ್ತಾಗ್ಬಿಡ್ತಿತ್ತು.
ಯಾವ್ದಾದ್ರೂ ಒಂದು ಗಿಡ ನಾಪತ್ತೆ ಆದ್ರೂ ಯಾರು ಕದ್ದಿರ್ಬೌದು? ಅಂತ ತಲೆ ಕೆಡಿಸ್ಕೊಳ್ತಿದ್ವಿ.
ಊರಲ್ಲಿ ಉಳ್ದವ್ರ ಮನೆ ಇತ್ತಲಲ್ಲಿ ಮಾತ್ಯಾರ್ಯಾರು ಗಿಡ ಸಾಕ್ತಿದಾರೆ ಅಂತ ಒಂದು ಸರ್ವೇ ಮಾಡ್ತಿದ್ವಿ. ಆಮೇಲೆ ಆ ಜಾಗಗಳಿಗೆ ಹೋಗಿ ಪೂರ್ತಿ ಚೆಕ್ ಮಾಡಿ, ನಮ್ಮ ಗಿಡ ಬೇರೆ ಎಲ್ಲಾದ್ರೂ ಸಿಕ್ರೆ ಅದನ್ನ ಎತ್ಗಂಡು ಬರ್ತಿದ್ವಿ.
~~~~( * ) ~~~~
ಸಶೇಷ...
0 comments:
Post a Comment