ಫೇಸ್‌ಬುಕ್‌ ವಿದಾಯಕ್ಕೆ ಮೇ 31ರಂದು ಮುಹೂರ್ತ? Goodbye Facebook?

ಇಂಟರ್ನೆಟ್ ಬಳಕೆದಾರರಲ್ಲಿ ಶೇ.90ರಷ್ಟು ಮಂದಿ ಫೇಸ್‌ಬುಕ್‌ ತಾಣದಲ್ಲಿ ಒಂದು ಅಕೌಂಟ್‌ ತೆರೆದಿರುತ್ತಾರೆ. ಜಗತ್ತಿನ ನಂ. 1 ಸಮುದಾಯ ತಾಣ ಫೇಸ್‌ಬುಕ್‌ದಲ್ಲಿ ಏನೇನೆಲ್ಲಾ ಸಿಗುತ್ತೆ ಅಂತ ಹೇಳೋಕ್ಕೆ ಹೋದರೆ ಅದು ಒಂದು ಪ್ರಬಂಧವೇ ಆದೀತು. ಅನೇಕರು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲಿ ತೇಲಿಬರುವ ಅನೇಕ ಆಲೋಚನೆಗಳನ್ನು ವಿವಿಧ ರೀತಿಯಲ್ಲಿ ಪ್ರಕಟಿಸುತ್ತಾರೆ. ಕೆಲವೊಮ್ಮೆ ಆಸಕ್ತಿ ಇರೋ ವಿಷಯಗಳಲ್ಲಿ ಚರ್ಚೆಗಳು ಸಹ ಜರುಗುತ್ತಿರುತ್ತವೆ. ಅನೇಕ ವರ್ಷಗಳ ಹಿಂದೆ ಕೊಂಡಿ ತಪ್ಪಿದ್ದ ಹಳೇ ಸ್ನೇಹಿತರು ಮತ್ತೆ ಸಿಗುತ್ತಾರೆ. ಹಾಗೂ ಹೊಸ ಹೊಸ ಸ್ನೇಹಿತರು ಕೂಡಿ ಬರುತ್ತಾರೆ.

ಫೇಸ್‌ಬುಕ್‌ನ ಯಶಸ್ಸು ಇರುವುದೇ ಇದು ಒದಗಿಸುವ ವಿವಿಧ ರೀತಿಯ ಆನ್ ಲೈನ್ ಅಪ್ಲಿಕೇಷನ್‌ಗಳಿಂದಾಗಿ. ಫಾರ್ಮ್‌ವಿಲ್ಲೆ, ಮಾಫಿಯಾ ವಾರ್ಸ್ ಹೀಗೇ ಇನ್ನೂ ಅನೇಕ ಆಟಗಳ ನೆರವಿನಿಂದ ಹೊಸ ಬಳಕೆದಾರರನ್ನು ದಿನೇ ದಿನೇ ತನ್ನತ್ತ ಸೆಳೆದುಕೊಂಡಿದೆ, ಜನಪ್ರಿಯತೆಯನ್ನು ನೂರ್ಮಡಿ ಮಾಡಿಕೊಂಡಿದೆ. ಜನಪ್ರಿಯತೆಯ ಅಡ್ಡಪರಿಣಾಮಗಳೂ ಇಲ್ಲದಿಲ್ಲ. ಜಗತ್ತಿನ ಅನೇಕ ಕಂಪನಿಗಳು ಕಚೇರಿ ಸಮಯದಲ್ಲಿ ಈ ಜಾಲತಾಣಕ್ಕೇ ಬೀಗ ಜಡಿದುಬಿಟ್ಟಿವೆ. ಕೆಲಸಗಾರರ ಏಕಾಗ್ರತೆಗೆ ಅಡ್ಡ ಪಡಿಸುವ ಮೂಲಕ ಅವರ ದಕ್ಷತೆಯನ್ನು ಹಾಗೂ ಕಂಪನಿಯ ಆದಾಯವನ್ನೂ ದಾರಿ ತಪ್ಪಿಸುತ್ತಿದೆ ಎಂಬ ಆತಂಕ ಕೆಲ ಕಂಪನಿಗಳಿಗೆ ಕಾಡಿದ್ದು ಸುಳ್ಳಲ್ಲ.

ಫೇಸ್‌ಬುಕ್‌ನಲ್ಲಿ ಇತ್ತೀಚಿಗೆ ತೆರೆದು ಕೊಂಡಿರುವ ಕೆಲವು ಹೊಸ ಅಪ್ಲಿಕೇಷನ್‌ಗಳ ಮೂಲಕ ಬಳಕೆದಾರರ ವಿವರಗಳು ಅಂತರ್ಜಾಲದಲ್ಲಿ ನಿರಾಯಾಸವಾಗಿ ಮೂರನೇ ವ್ಯಕ್ತಿಗಳಿಗೆ ಸೋರಿ ಹೋಗುತ್ತಿವೆ ಎಂಬ ಗಂಭೀರ ಆರೋಪವನ್ನು ಈಗ ಈ ತಾಣ ಎದುರಿಸುತ್ತಿದೆ. ಸುಮಾರು 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ಗೆ ಇದೇ ಮೇ 11 ಹಾಗೂ ಮೇ 13, ಎರಡು ದಿನಗಳ ಅಂತರದಲ್ಲಿ ಸುಮಾರು ನಾಲ್ಕು ಮಿಲಿಯನ್ ಬಳಕೆದಾರರು ಫೇಸ್‌ಬುಕ್‌ಗೆ ವಿದಾಯ ಹೇಳಿದ್ದಾರಂತೆ.

ಸದ್ಯಕ್ಕೆ ಪೇಸ್‌ಬುಕ್‌ನಲ್ಲಿ ಭರ್ಜರಿ ಬಳಕೆಯಲ್ಲಿರುವ ಪದಗಳೆಂದರೆ, "Deactivate Facebook account" ಹಾಗೂ "delete Facebook". ಪೇಸ್‌ಬುಕ್‌ಗೆ ಈಗ ವಿದಾಯ ಹೇಳುವ ಮಹೂರ್ತ ಹತ್ತಿರವಾಗುತ್ತಿದೆ ಎಂದು ಘೋಷಿಸುತ್ತಿರುವ ಒಂದು ಹೊಸ ಜಾಲತಾಣವೇ ಹುಟ್ಟು ಕೊಂಡಿದೆ. http://www.quitfacebookday.com/ ಈ ತಾಣವು ಇದೇ ತಿಂಗಳ 31ರಂದು ಫೇಸ್‌ಬುಕ್‌ಗೆ ವಿದಾಯ ಹೇಳಲು ಮುಹೂರ್ತವನ್ನು ಫಿಕ್ಸ್ ಮಾಡಿದೆ.

ಗಮನಿಸಬೇಕಾದ ಹಾಸ್ಯವೆಂದರೆ, ಪೇಸ್‌ಬುಕ್ಕಿನ ಪ್ರೈವೆಸಿ ಪಾಲಿಸಿಯಲ್ಲಿ ಅಮೇರಿಕದ ಸಂವಿಧಾನದಲ್ಲಿರುವ ಪದಗಳಗಿಂತ ಹೆಚ್ಚಿನ ಪದಗಳಿವೆಯಂತೆ. ಆದರೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಹ ಈ ಜಾಲತಾಣದ ವಿರುದ್ದ ಕೆಲವು ಮೊಕದ್ದಮೆಗಳು ದಾಖಲಾಗಿದ್ದವು. ಫೇಸ್‌ಬುಕ್‌ ಮೂಲಕ ಬಳಕೆದಾರರ credit cardನಿಂದ ಹಣ ಸೋರಿ ಹೋಗಿರುವ ಮಾಹಿತಿ ನಿಮಗೆ ತಿಳಿದೇ ಇದೆ ಎಂದು ಭಾವಿಸುತ್ತೇನೆ.

ಫೇಸ್‌ಬುಕ್‌ ಒಂದು ಒಳ್ಳೆಯ ತಾಣವೇ ಆಗಿರಬಹುದು ಆದರೆ ಈ ರೀತಿ ಬಳಕೆದಾರರಿಗೆ ಅನ್ಯಾಯವಾಗಿರುವುದು ಸಹ ಸತ್ಯ. ಆದ್ದರಿಂದ ನೀವು ಸಹ ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸ್ವಲ್ಪ ಹುಷಾರಾಗಿರಿ ಎಂದಷ್ಟೇ ಎಚ್ಚರಿಸಲು ಇಚ್ಚಿಸುತ್ತೇನೆ.

-------------------


ಕೊನೆಗೆ ಈ ತಲೆಬರಹಕ್ಕೆ ಸಂಬಂದಿಸದೇ ಇರುವ ಮತ್ತೊಂದು ಅಂಶವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಗುಜರಾತ್ ಸರ್ಕಾರವು ಭಾರತ ಸಂವಿಧಾನದಲ್ಲಿಯೇ ಮೊಟ್ಟಮೊದಲ ಬಾರಿಗೆ,ಇ-ವೋಟಿಂಗ್‌ ಮೂಲಕ ಮುಂಬರುವ ಚುನಾವಣೆಗಳನ್ನು ನಡೆಸುವ ಸಿದ್ದತೆಗಳನ್ನು ಯಶಸ್ವಿಯಾಗಿ ಮುಂದುವರಿಸಿದೆಯಂತೆ. ಭಾರತ ದೇಶದಲ್ಲಿಯೇ ಇದೇ ಮೊಟ್ಟ ಮೊದಲ ಬಾರಿಗೆ  ಚುನಾವಣೆಗಳನ್ನು ಸಂಪೂರ್ಣವಾಗಿ ಅಂತರ್ಜಾಲದಲ್ಲಿಯೇ ಮಾಡಿಮುಗಿಸುವ ಎಲ್ಲಾ ಸಾದ್ಯತೆಗಳಿವೆ. ಶ್ರೀ ಮೋದಿಯವರನ್ನು ದೇಶದಲ್ಲಿಯೇ ಮಾದರಿ ಮುಖ್ಯಮಂತ್ರಿಗಳೆಂದು ಕಳೆದ ಮೂರು ವ‍ರ್‍ಷಗಳಿಂದ ಗುರ್ತಿಸಿರುವುದು ಯೋಗ್ಯ ನಿರ್ದಾರವಲ್ಲವೇ? ಮೋದಿಯವರಿಗೆ ಜೈವೋ ಎನ್ನಲಡ್ಡಿಯಿಲ್ಲ.

1 comments:

ಸೀತಾರಾಮ. ಕೆ. / SITARAM.K said...

nice information

Post a Comment