Showing posts with label ಕನ್ನಡ ಛಂದಸ್ಸು. Show all posts
Showing posts with label ಕನ್ನಡ ಛಂದಸ್ಸು. Show all posts

‘ತ್ರಿಪದಿ’ಯಲ್ಲಿ ತ್ರಿವಿಧ

ತ್ರಿಪದಿ ಎಂಬುದು ಹೆಸರೇ ಸೂಚಿಸುವಂತೆ ಮೂರು ಪಾದಗಳುಳ್ಳ ಪದ್ಯ. ಇದನ್ನು ತಿಪದಿ, ತಿವದಿ, ತ್ರಿವುಡೆ, ತ್ರಿಪದಿಕಾ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಬೇಂದ್ರೆಯವರು ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಇವುಗಳು ಅಚ್ಚಗನ್ನಡದ ಮಟ್ಟುಗಳು. ಜಾನಪದ ಸಾಹಿತ್ಯದಲ್ಲಿ ಇವುಗಳ ವಿರಾಟ್‌ಸ್ವರೂಪವನ್ನು ಕಂಡಾಗ ಇವುಗಳ ಇತಿಹಾಸವನ್ನು ನಿಖರವಾಗಿ ಗುರುತಿಸುವುದು ಕಷ್ಟವೆನ್ನಿಸುತ್ತದೆ. ಶಾಸನಗಳಲ್ಲಿ ಆಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ಪಂಪ ಪೊನ್ನರ ಕೃತಿಗಳಲ್ಲಿ ಇಣುಕಿ, ಮುಂದಿನ ಕವಿಕೃತಿಗಳಲ್ಲಿ ಕಾಣಿಸಿಕೊಂಡು ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಿಕೊಂಡಿವೆ. ಕನ್ನಡ ಜಾನಪದ ಸಾಹಿತ್ಯಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.

ತ್ರಿಪದಿಗಳ ಲಕ್ಷಣಗಳನ್ನು ಈ ರೀತಿ ಸರಳೀಕರಿಸಬಹುದು.-
  • ಮೂರು ಪಾದಗಳು.
  • ಹನ್ನೊಂದು ಗಣಗಳು.
  • 6 ಮತ್ತು 10ನೇ ಗಣಗಳು ಬ್ರಹ್ಮಗಣಗಳು; ಉಳಿದವು ವಿಷ್ಣುಗಣಗಳು.
  • ಕ್ವಚಿತ್ತಾಗಿ ವಿಷ್ಣುವಿಗೆ ಬದಲಾಗಿ ರುದ್ರ ಬರಬಹುದು.
  • 1 ಮತ್ತು 2ನೇ ಪಾದದಲ್ಲಿ ನಾಲ್ಕು ನಾಲ್ಕು ಗಣಗಳು ಬಂದರೆ, 3ನೇ ಪಾದದಲ್ಲಿ ಮೂರು ಗಣಗಳು ಬರುತ್ತವೆ.
ಅಂಶ ತ್ರಿಪದಿಗೆ ಬಾದಾಮಿ ಶಾಸನದ (ಏಳನೇ ಶತಮಾನ) ಒಂದು ತ್ರಿಪದಿಯನ್ನು ನೋಡಬಹುದು.
ವಿ ವಿ ವಿ ವಿ
ಸಾಧುಗೆ/ಸಾಧುಮಾ/ಧುರ್ಯಂಗೆ/ಮಾಧುರ್ಯಂ
ವಿ ಬ್ರ ವಿ ವಿ
ಬಾಧಿಪ್ಪ/ಕಲಿಗೆ/ ಕಲಿಯುಗ/ವಿಪರೀತನ್
ವಿ ಬ್ರ ವಿ
ಮಾಧವ/ನೀತನ್/ಪೆಱನಲ್ಲ
ತ್ರಿಪದಿಗಳಲ್ಲಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ,-
ಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಮೊದಲ ಗಣವು ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ರು ವಿ ವಿ ವಿ
ಹೇಸಿನಿನ್ನ / ಬದುಕೀಗೆ/ ಆಶೆ ನಾ/ ಮಾಡಿಲ್ಲ
ವಿ ಬ್ರ ವಿ ವಿ
ರೇಸಿಮೆ/ ಉಡುವ /ದೊರಿನನ್ನ/ ರಾಯರ
ವಿ ಬ್ರ ವಿ
ಆಶೆಮಾ/ಡೇನ /ಅನುಗಾಲ//
ವಿಚಿತ್ರ
ಸಾಮಾನ್ಯ ಅಂಶತ್ರಿಪದಿಯಂತೆಯೇ ಇದ್ದು, ಕೊನೆಯ ಗಣ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತದೆ.
ವಿ ವಿ ವಿ ವಿ
ಹಲ್ಲೀಗೆ/ ಹಲಪೂಡಿ /ಗಲ್ಲಾಕೆ /ಹರಿಷಾಣ
ವಿ ಬ್ರ ವಿ ವಿ
ಗೊಲ್ಲರೋ/ಣ್ಯಾಗ/ ಬರುವೊಳು/ ಕಂದವ್ವ
ವಿ ಬ್ರ ರು
ನಲ್ಲ್ಯಾರ/ ಒಳಗ/ಕರಚೆಲುವಿ//
ಚಿತ್ರಲತೆ
ಮೊದಲ ಮತ್ತು ಕೊನೆಯ ಗಣಗಳೆರಡೂ ವಿಷ್ಣುವಿಗೆ ಬದಲಾಗಿ ರುದ್ರ ಬರುತ್ತವೆ.
ರು ವಿ ವಿ ವಿ
ಚೆಲುವಗಾತಿ/ ಚೆನ್ನವ್ವ/ ಒಲವಲ್ಲೆ/ ಬೆಳೆದೋಳು
ವಿ ಬ್ರ ವಿ ವಿ
ಒಲವಿಗೆ /ಮನಸ/ ಕೊಟ್ಟೋಳು/ ಚೆಲುವಮ್ಮ
ವಿ ಬ್ರ ರು
ಒಲವಲ್ಲೆ /ಚೆಲುವ /ಕಂಡವಳು/
ಆಂಶಿಕವಾಗಿ ಮಾತ್ರಾಗಣವಾಗಿ ಪರಿವರ್ತಿತವಾಗಿರುವ ತ್ರಿಪದಿಗಳೂ ಇವೆ. ಅದರ ಲಕ್ಷಣಗಳು, 6 ಮತ್ತು 10ನೇ ಗಣಗಳು ಬ್ರಹ್ಮ ಗಣಗಳಾಗೇ ಉಳಿದುಕೊಂಡು, ಉಳಿದ ಗಣಗಳು 5 ಮಾತ್ರೆಯ ಗಣಗಳಾಗಿವೆ. ಅಕ್ಕಮಹಾದೇವಿಯ ಯೋಗಾಂಗತ್ರಿವಿಧಿಯಲ್ಲಿ ಇಂತಹ ತ್ರಿಪದಿಗಳು ಸಿಗುತ್ತವೆ. ಪ್ರಾರಂಭದಿಂದ ಅಂಶಗಣಾತ್ಮಕವಾಗಿದ್ದು, ಸುಮಾರು 12ನೇ ಶತಮಾನದ ಹೊತ್ತಿಗೆ ಮಾತ್ರಾಗಣಾತ್ಮಕವಾಗುವ ಪ್ರಕ್ರಿಯೆಯನ್ನು ತೋರುತ್ತಿರುವುದು ಗೊತ್ತಾಗುತ್ತದೆ.
5 5 5 5
ಮಾಘಮಾ/ಸವುಪೋಗೆ/ಮೇಲೆಬಂ/ದಿತುಚೈತ್ರ
5 ಬ್ರ 5 5
ಬೇಗಮಾ/ಮರವು/ತಳಿರೇರೆ/ಅದಕಂಡು
5 ಬ್ರ 5
ಕೂಗಿಕರೆ/ಯಿತ್ತು/ಕಳಕಂಠ/
12ನೇ ಶತಮಾದಿಂದೀಚಿಗೆ ಮಾತ್ರಾತ್ರಿಪದಿಗಳು ಹೆಚ್ಚಾಗಿ ದೊರೆಯುತ್ತವೆ. 6 ಮತ್ತು 10ನೇ ಗಣಗಳು 3 ಮಾತ್ರೆಯ ಗಣಗಳಾಗಿದ್ದರೆ, ಉಳಿದವು 5 ಮಾತ್ರೆಯ ಗಣಗಳಾಗಿವೆ. ಒಟ್ಟು 51 ಮಾತ್ರೆಗಳು.
5 5 5 5
ಸಾಲವನು/ಕೊಂಬಾಗ/ಹಾಲೋಗ/ರುಂಡಂತೆ
5 3 5 5
ಸಾಲಿಗನು/ಬಂದು/ಎಳೆವಾಗ/ಕಿಬ್ಬದಿಯ
5 3 5
ಕೀಲುಮುರಿ/ದಂತೆ/ ಸರ್ವಜ್ಞ
6 ಮತ್ತು 10ನೇ ಗಣಗಳಲ್ಲಿ ಕ್ವಚಿತ್ತಾಗಿ 3 ಮಾತ್ರೆಯ ಬದಲು 4 ಮಾತ್ರೆಗಳು ಬರಬಹುದು. ಆಗ ಒಟ್ಟು ಮಾತ್ರೆಗಳು ೫೨/೫೩ ಆಗುತ್ತವೆ.
ಅಂಶಗಣ ಮತ್ತು ಮಾತ್ರಾಗಣಗಳೆರಡರ ಲಕ್ಷಣಗಳಿಗೂ ಹೊಂದುವ ತ್ರಿಪದಿಗಳೂ ಇವೆ.
ವಿ/5 ವಿ/5 ವಿ/5 ವಿ/5
ತೊಟ್ಟೀಲ/ಹೊತ್ಕೊಂಡು/ತೌರ್ಬಣ್ಣ/ಉಟ್ಕೊಂಡು
ವಿ/5 ಬ್ರ/3 ವಿ/5 ವಿ/5
ಅಪ್ಪಕೊ/ಟ್ಟೆಮ್ಮೆ/ಹೊಡ್ಕೊಂಡು/ತಂಗ್ಯಮ್ಮ
ವಿ/5 ಬ್ರ/3 ವಿ/5
ತಿಟ್ಹತ್ತಿ/ ತಿರುಗಿ/ನೋಡ್ಯಾಳು// Read More!

ಆರು ಸಾಲಿನ ಷಟ್ಪದಿಯಲ್ಲೂ ಇಷ್ಟೊಂದು ಬಗೆಯ ಚೆಲುವೆ!?

ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ.

ದೇಸಿ ಛಂದಸ್ಸಿನ ಮುಖ್ಯ ಲಕ್ಷಣದಂತೆ ಷಟ್ಪದಿಯೂ ಅಂಶ ಛಂದಸ್ಸೇ ಆಗಿತ್ತು. ಬ್ರಹ್ಮ, ವಿಷ್ಣು, ರುದ್ರ ಎಂದು ಮೂರು ಬಗೆಯ ಅಂಶಗಳನ್ನು ಒಳಗೊಂಡಿರುವುದೇ ಅಂಶ ಛಂದಸ್ಸು. ಅಂಶ ಷಟ್ಪದಿಯ ಒಂದು ಉದಾಹರಣೆ:

ವಿ ವಿ               
ವಿ ವಿ               
ವಿ ವಿ ರು           
ವಿ ವಿ               
ವಿ ವಿ               
ವಿ ವಿ ರು           

ಅದುಪರ/ಮಾಸ್ಪದ
ಮದುಪುಣ್ಯ/ಸಂಪದ
ಮದುಮಹಾ/ಭ್ಯುದಯವಿ/ಲಾಸಾವಾಸಂ
ಅದುದಿಬ್ಯಂ/ಮದುಸೇಬ್ಯ
ಮದುಸೌಮ್ಯ/ಮದುರಮ್ಯ
ಮದುಸುಖಾ/ಧಾರಸಂ/ಸಾರಸಾರಂ

ಸುಮಾರು ಹನ್ನೆರಡನೇ ಶತಮಾನದಲ್ಲಿ ಉಂಟಾದ ದೇಸಿ ಛಂದಸ್ಸಿನ ಪುರುಜ್ಜೀವನ ಮತ್ತು ನವೀಕರಣದ ಫಲವಾಗಿ ತ್ರಿಪದಿಯಂತೆಯೇ ಷಟ್ಪದಿಯೂ ಮಾತ್ರಗಣಾತ್ಮಕವಾಗಿ ಬದಲಾಯಿತು. ಅಕ್ಷರಬಂದ ಸಂಪೂರ್ಣ ಮಾತ್ರಗಳ ಸಂಖ್ಯೆಯನ್ನೇ ಆದರಿಸುವಂತಾಯಿಯತು. ಲಘುವಿಗೆ ಒಂದಾ ಮಾತ್ರೆ, ಗುರುವಿಗೆ ಎರಡು ಮಾತ್ರೆ ಲೆಕ್ಕ.

ಆದರೆ ಈ ಮಾತ್ರಾಷಟ್ಪದಿಯಲ್ಲಿ ದೊಡ್ಡ ಕ್ರಾಂತಿಯೇ ಆಗಿಹೋಯಿತು. ಪ್ರಮುಖವಾಗಿ ಆರು ವಿಧಗಳು ಬೆಳೆದು ಬಂದವು. ಒಂದೇ ಮಾತ್ರೆಯ ವ್ಯತ್ಯಾಸವಾದರೂ ಅವುಗಳ ಲಯ, ಸೊಗಸು ಅದ್ಭುತವಾದುದ್ದು. ಕೆಳಗೆ ಕೊಟ್ಟಿರುವ ಉದಾಹರಣೆಗಳನ್ನು ಓದಿಕೊಳ್ಳುವಾಗ ಹಾಡಿಕೊಳ್ಳುವಾಗ ಅವುಗಳ ಲಯದ ವ್ಯತ್ಯಾಸ, ಸೊಗಸು ನಿಮಗೇ ಮನದಟ್ಟಾಗುತ್ತದೆ.

ಶರ ಷಟ್ಪದಿ
4 4                         
4 4                          
4 4 4  ಗುರು              
4 4                          
4 4                           
4 4 4 ಗುರು               

ಈಶನ/ಕರುಣೆಯ
ನಾಶಿಸು/ವಿನಯದಿ
ದಾಸನ/ಹಾಗೆಯೆ/ನೀಮನ/ವೇ
ಕ್ಲೇಶದ/ವಿಧವಿಧ
ಪಾಶವ/ಹರಿದು ವಿ
ಲಾಸದಿ/ಸತ್ಯವ/ತಿಳಿಮನ/ವೇ

ಕುಸುಮ ಷಟ್ಪದಿ
5 5                       
5 5                       
5 5 5 ಗುರು            
5 5                       
5 5                       
5 5 5 ಗುರು            

ಅವರವರ/ದರುಶನಕೆ
ಅವರವರ/ವೇಷದಲಿ
ಅವರವರಿ/ಗೆಲ್ಲ ಗುರು/ನೀನೊಬ್ಬ/ನೆ
ಅವರವರ/ಭಾವಕ್ಕೆ
ಅವರವರ/ಪೂಜೆಗಂ
ಅವರವರಿ/ಗೆಲ್ಲ ಶಿವ/ನೀನೊಬ್ಬ/ನೆ

ಭೋಗ ಷಟ್ಪದಿ
3 3 3 3                  
3 3 3 3                  
3 3 3 3 3 3 ಗುರು    
3 3 3 3                   
3 3 3 3                   
3 3 3 3 3 3 ಗುರು            

ಮೆರೆಯು/ತಿದ್ದ/ಭಾಗ್ಯ/ವೆಲ್ಲ
ಹರಿದು/ಹೋಯಿ/ತೆನುತ/ತಿರುಕ
ಮರಳಿ/ನಾಚಿ/ಹೋಗು/ತಿದ್ದ/ಮರುಳ/ನಂತೆಯೇ
ಧರೆಯ/ಭೋಗ/ವನ್ನು/ಮೆಚ್ಚಿ
ಪರವ/ಮರೆತು/ಕೆಡಲು/ಬೇಡ
ಧರೆಯ/ಭೋಗ/ಕನಸಿ/ನಂತೆ/ಕೇಳು/ಮಾನ/ವಾ

ಭಾಮಿನಿ ಷಟ್ಪದಿ
3 4 3 4                 
3 4 3 4                 
3 4 3 4 3 4 ಗುರು  
3 4 3 4                 
3 4 3 4                  
3 4 3 4 3 4 ಗುರು   

ಇಳಿದು/ಬಂದಳು/ವರ್ಷೆ/ಯಂದದಿ/
ಒಲಿದು/ಬಂದಳು/ನಲ್ಲೆ/ಯಂದದಿ/
ತೊಳೆಯ/ಬಂದಳು/ಮನದ/ಕಲ್ಮಶ/ಹರಿಯ/ಮೆರೆಸಲು/ತಾ
ನಿಳೆಯ/ರೂಪದಿ/ಸಹನೆ/ಯಿಂದಾ/
ಕಳೆಯ/ಬಂದಳು/ಮೋಹ/ಮತ್ಸರ/
ಗಳನು/ಭಾಮಿನಿ/ನಾರ/ಣಪ್ಪನಿ/ಗೊಲಿದ/ಳಿಂದುಮು/ಖೀ

ಪರಿವರ್ಧಿನಿ ಷಟ್ಪದಿ
4 4 4 4
4 4 4 4
4 4 4 4 4 4 ಗುರು
4 4 4 4
4 4 4 4
4 4 4 4 4 4 ಗುರು

ಸ್ಮರ ರಾ/ಜ್ಯದ ಮೈ/ಸಿರಿ ಶೃಂ/ಗಾರದ
ಶರನಿಧಿ/ರತಿ ನಾ/ಟ್ಯದ ರಂ/ಗ ಸ್ಥಳ
ವಿರಹದ/ನೆಲೆವೀ/ಡೋಪರ/ಕೂರಾ/ಟದ ಕೊಸ/ರಿನ ಗೊ/ತ್ತು
ಸರಸರ/ಸಂತವ/ಣಿಯ ಮನೆ/ಸುಗ್ಗಿಯ
ಪುರವಾ/ಗರ ಭೂ/ಪಾಲಯ/ವಪ್ಪಂ
ತಿರೆಪೇ/ಳಿದನಮ/ರುಕವನು/ದೇಪಮ/ಹೀಪತಿ/ಕನ್ನಡಿ/ಸಿ

ವಾರ್ಧಕ ಷಟ್ಪದಿ
5 5 5 5
5 5 5 5
5 5 5 5 5 5 ಗುರು
5 5 5 5
5 5 5 5
5 5 5 5 5 5 ಗುರು

ಪುರದಪು/ಣ್ಯಂಪುರುಷ/ರೂಪಿಂದೆ/ಪೋಗುತಿದೆ
ಪರಿಜನದ/ಭಾಗ್ಯವಡ/ವಿಗೆನಡೆಯು/ತಿದೆಸಪ್ತ
ಶರಧಿಪರಿ/ವೃತಧರೆಯ/ಸಿರಿಯಸೊಬ/ಗಙತ/ವಾಸಕ್ಕೆ/ಪೋಗುತಿದೆ/ಕೋ
ಎರೆವದೀ/ನಾನಾಥ/ರಾನಂದ/ವಡಗುತಿದೆ
ವರಮುನೀಂ/ದ್ರರಯಾಗ/ರಕ್ಷೆಬಲ/ವಳಿಯುತಿದೆ
ನಿರುತವೆಂ/ದೊಂದಾಗಿ/ಬಂದುಸಂ/ದಿಸಿನಿಂದ/ಮಂದಿನೆಱೆ/ಮೊಱೆಯಿಟ್ಟು/ದು

ಉದ್ಧಂಡ ಷಟ್ಪದಿ
ಕೇವಲ ಈ ಆರು ವಿಧಗಳಿಗೇ ಷಟ್ಪದಿಯ ಬೆಳವಣಿಗೆ ಸೀಮಿತವಾಗಿ ಉಳಿಯಲಿಲ್ಲ. ಬೇರೆ ಇನ್ನೊಂದು ಉದ್ಧಂಡ ಷಟ್ಪದಿ ಎನ್ನುವ ಪ್ರಕಾರವೂ ಬೆಳಕಿಗೆ ಬಂತು. ಅದರಲ್ಲಿಯೇ ಎರಡು-ಮೂರು ಕವಲುಗಳಾದವು. ಆದರೆ ಅದು ಅಷ್ಟೊಂದು ಜನಪ್ರಿಯವಾಗಿ ಬೆಳೆಯಲಿಲ್ಲ. ಒಂದೆರಡು ಉದಾಹರಣೆಗಳನ್ನು ನೋಡಬಹುದು.

4 4 4 4 4
4 4 4 4 4
4 4 4 4 4 4 4 ಗುರು
4 4 4 4 4
4 4 4 4 4
4 4 4 4 4 4 4  ಗುರು

ಬಂದಳು/ಬಂದಳು/ಚಿನ್ನದ/ಚಿಗರೆಯ/ತೆರದಲಿ
ತಂದಳು/ತಂದಳು/ಕಣ್ಮಣಿ/ಸೊಬಗನು/ಸಿರಿಯಲಿ
ಚೆಂದವೊ/ಚೆಂದವೊ/ಈಜಗ/ಎನ್ನುತ/ಕುಣಿಯುತ/ಕುಣಿಸುತ/ಹಾಡಿದ/ಳು

4 4 4 4 4
4 4 4 4 4
4 4 4 4 4 4 4 4
4 4 4 4 4
4 4 4 4 4
4 4 4 4 4 4 4 4

ಪರಿಣಾ/ಮದಕಣಿ/ಶಾಂತಿಯ/ನಿಧಿಭ/ಕ್ತಿಯಸಾ
ಗರುಮೇ/ಕೋನಿ/ಷ್ಟೆಯಹರ/ಗತಿಸಾ/ಮರ್ಥ್ಯದ
ತರುನೀ/ತಿಯಕಡೆ/ಉದಯಾ/ಗಾರಂ/ಪುಣ್ಯದ/ಪಂಜಂ/ಸತ್ಯದ/ಸದನಾ

ಈ ಉದಾಹರಣೆಗಳಲ್ಲಿ ನಿಮಗಿಷ್ಟವಾದುದನ್ನು ಮೇಲಿಂದ ಮೇಲೆ ಹಾಡಿಕೊಳ್ಳಿ. ನೀವೇನಾದರು ಕವಿತೆ ಬರೆಯುವವರಾಗಿದ್ದರೆ, ನಿಮ್ಮಿಂದ ಅದೇ ಲಯದ ಕವಿತೆ ಹುಟ್ಟುತ್ತದೆ. ಪಂಡಿತರಿಂದ ತಿಣುಕಿ ಸೃಷ್ಟಿಯಾದುದಲ್ಲ; ಜನಪದರಿಂದ ಸಹಜವಾಗಿ ಸೃಷ್ಟಿಯಾದ ಛಂದೋಗಂಗೋತ್ರಿ! ಇದೇ ದೇಸಿ ಛಂದಸ್ಸಿನ ವೈಶಿಷ್ಟ್ಯ.

Read More!